“ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ರೋಗಿಗಳಿಗೆ ಅಗತ್ಯವಾದ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುವುದು”
“ಸಂಸ್ಥೆಯ ಘೋಷಣೆ”
“ ದಾನ, ಸಹಾಯಧನ ಮತ್ತು ಮಾನವೀಯ ಮೌಲ್ಯಗಳ ಅನುಸಂಧಾನ”
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶೇಷವಾಗಿ ಹೃದಯ ಆರೈಕೆಗಾಗಿಯೇ (ಬೆಂಗಳೂರಿನ ಬನ್ನೇರುಘಟ್ಟರಸ್ತೆ ಯಲ್ಲಿರುವ ಕೇಂದ್ರ ಸ್ಥಾನ, ಬೆಂಗಳೂರಿನ ರಾಜಾಜಿನಗರದ ಇಎಸ್ಐ-ಎಂಹೆಚ್ ಶಾಖೆ, ಮೈಸೂರು ಹಾಗೂ ಕಲಬುರಗಿ ಶಾಖೆಗನ್ನೊಳಗೊಂಡಂತೆ) 1600 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಹೃದ್ರೋಗ ಆರೈಕೆ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು ಸಮಾಜದ ಎಲ್ಲಾ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುತ್ತಿದೆ ಮತ್ತು ಅರ್ಹ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುತ್ತದೆ. ನಾವು “ಚಿಕಿತ್ಸೆ ಮೊದಲು ಪಾವತಿ ನಂತರ” (ಟ್ರೀಟ್ಮೆಂಟ್ ಫಸ್ಟ್-ಪೇಮೆಂಟ್ ನೆಕ್ಸ್ಟ್) ಎಂಬ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇವೆ. ತುರ್ತು ಹೃದ್ರೋಗ ಚಿಕಿತ್ಸೆ ಅಗತ್ಯವಿರುವ ರೋಗಿಗೆ ಯಾವುದೇ ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡಲಾಗುತ್ತಿದೆ.
ಸಂಸ್ಥೆಯು ಕಳೆದ 15 ವರ್ಷಗಳಲ್ಲಿ ಶೇ.500ರಷ್ಟು ಪ್ರಗತಿಯನ್ನು ದಾಖಲಿಸಿದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ 12 ಕ್ಯಾತ್ಲ್ಯಾಬ್ಗಳು, 12 ಶಸ್ತ್ರಚಿಕಿತ್ಸಾ ಕೊಠಡಿಗಳು, ನಾನ್-ಇನ್ವ್ಯಾಸೀವ್ ಪ್ರಯೋಗಾಲಯಗಳು ಮತ್ತು 24 ಗಂಟೆಗಳ ತುರ್ತು ಘಟಕವನ್ನು ಹೊಂದಿದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಎನ್ಎಬಿಹೆಚ್ ಮಾನತ್ಯೆಯನ್ನು ಪಡೆದುಕೊಂಡಿದೆ ಮತ್ತು ಇದು 2018 ರಲ್ಲಿ ಎನ್ಎಬಿಹೆಚ್ ಮರು ಮಾನ್ಯತೆ ಪಡೆದ ದೇಶದ ಮೊದಲ ಸಾರ್ವಜನಿಕ ಹೃದ್ರೋಗ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೋಧನಾ ವಿಭಾಗದಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ದಿಂದ ಡಿ.ಎಂ.ಕಾರ್ಡಿಯಾಲಜಿಯಲ್ಲಿ 23 ಸ್ನಾತಕೋತ್ತರ ಸೀಟುಗಳು, ಪೀಡಿಯಾಟ್ರಿಕ್ ಕಾರ್ಡಿಯಾಲಜಿಯಲ್ಲಿ 2 ಸೀಟುಗಳನ್ನು ಒಳಗೊಂಡಂತೆ, ಎಂ.ಸಿ.ಹೆಚ್ ಕಾರ್ಡಿಯಾಕ್ ಸರ್ಜರಿಯಲ್ಲಿ 12 ಸೀಟುಗಳು ಮತ್ತು ಡಿ.ಎಂ. ಕಾರ್ಡಿಯಾಕ್ ಅರವಳಿಕೆಯಲ್ಲಿ 8 ಸೀಟುಗಳು ಮಂಜೂರಾಗಿದ್ದು ಇದು ದೇಶದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಸ್ನಾತಕೋತ್ತರ ಬೋಧನಾ ಸಂಸ್ಥೆಯಾಗಿದೆ.
ಪ್ರಸ್ತುತ ಪ್ರತಿದಿನ ಸರಾಸರಿ 1200-1400 ರೋಗಿಗಳು ಈ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. 2020ರ ಅವಧಿಯಲ್ಲಿ 391587 ಹೊರ ರೋಗಿಗಳು ಮತ್ತು 42008 ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು 2000 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು, ಕರೋನರಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟೀಸ್, ವಾಲ್ವುಲೋಪ್ಲಾಸ್ಟೀಸ್, ಪೇಸ್ಮೇಕರ್, ಡಿವೈಸ್ ಕ್ಲೋಷರ್ ಮತ್ತು ಇತರ ಕಾರ್ಯವಿಧಾನಗಳನ್ನು ಒಳಗೊಂಡ 30886 ಕ್ಯಾತ್ಲ್ಯಾಬ್ ಕಾರ್ಯವೀಧಾನಗಳನ್ನು ಈ ಸಂಸ್ಥೆಯಲ್ಲಿ ಮಾಡಲಾಗಿದೆ. ವಾರ್ಷಿಕವಾಗಿ ಸುಮಾರು 500 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ಆಂಜಿಯೋಪ್ಲಾಸ್ಟಿಗಳನ್ನು ಬಡ ರೋಗಿಗಳಿಗೆ ಉಚಿತವಾಗಿ ಮಾಡಲಾಗಿದೆ. ಸುಮಾರು 20000 ಎಕೋಕಾರ್ಡಿಯೋಗ್ರಾಮ್ಗಳನ್ನು ಮಾಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ.75 ರಷ್ಟು ರೋಗಿಗಳು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ.
ಈ ಸಂಸ್ಥೆಯು ಅರ್ಹ ನುರಿತ ಪೂರ್ಣ ಸಮಯದ ಪ್ರಾಧ್ಯಾಪಕರುಗಳನ್ನು ಒಳಗೊಂಡಿದೆ/ 100 ಕಾರ್ಡಿಯಾಲಜಿಸ್ಟ್ಗಳು, 48 ಕಾರ್ಡಿಯೋಥೋರಾಸಿಕ್ ಸರ್ಜನ್ಗಳು, 40 ಕಾರ್ಡಿಯಾಕ್ ಅರವಳಿಕೆ ತಜ್ಞರು, 6 ವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸಕರು ಮತ್ತು ಇತರ ಪೂರಕ ಸಿಬ್ಬಂದಿಗಳನ್ನೊಳಗೊಂಡಿದೆ.
ಪ್ರಶಸ್ತಿಗಳು
ಗೌರವಾನ್ವಿತ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರಿಂದ ಡಾ.ಸಿ.ಎನ್. ಮಂಜುನಾಥ್ ರವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ